Thursday 11 June 2020

ಉಳಿಕೆಯೇ ಗಳಿಕೆ

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕನಸಿರುತ್ತದೆ. ನಾಳೆ ಇವತ್ತಿಗಿಂತ ಚೆನ್ನಾಗಿ ಇರಬೇಕು ಎನ್ನುವ ಕನಸು. ಹೊಸ ಕಾರು ಖರೀದಿಸಬೇಕು, ಸ್ವಂತ ಮನೆ ಹೊಂದಬೇಕು. ನಗರಗಳಲ್ಲಿ ನಿವೇಶನ ಕೊಳ್ಳಬೇಕು. ಹೀಗೆ ಒಂದಿಲ್ಲೊಂದು ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ. ಈ ಎಲ್ಲ ಕನಸುಗಳ ಈಡೇರಿಕೆಗಾಗಿ ಒಂದು ಸಂಕಲ್ಪವನ್ನು ಮಾಡಬೇಕು. ಆ ಸಂಕಲ್ಪವೇನೆಂದರೆ, 'ಉಳಿತಾಯ ಮಾಡುವುದು'. ಖರ್ಚೆಲ್ಲ ಕಳೆದು ಉಳಿದದ್ದು ಉಳಿತಾಯವಲ್ಲವೇ ಅಲ್ಲ. ಮೊದಲು ಉಳಿಸುವುದು; ನಂತರ ಖರ್ಚು ಮಾಡುವುದು. ಯಾಕೆ ಉಳಿಸಬೇಕು ಎನ್ನುವುದು ಸ್ಪಷ್ಟವಾದರೆ ಉಳಿಸುವುದು ಕಷ್ಟಕರ ಅನಿಸದೆ, ಇಷ್ಟಕರವಾಗುತ್ತದೆ.
ನಮ್ಮ ಜೀವನದಲ್ಲಿ ನಾವು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ ಎಷ್ಟು ಉಳಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಏನೂ ಉಳಿಸದಿದ್ದರೆ, ಏನೂ ಗಳಿಸದ ಹಾಗೆ. ಅದಕ್ಕೆ ಹೇಳುತ್ತಿದ್ದರು ಅಜ್ಜ ದುಡಿದದ್ದೆಲ್ಲ ಮೊಮ್ಮಗನ ಉಡಿದಾರಕ್ಕೆ ಎಂದು. ಹಾಗಾದರೆ ದುಡಿದದ್ದು ಪ್ರಯೋಜನ ಇಲ್ಲ. ಯಾವುದೇ ಹಣಕಾಸು ಸಲಹಗಾರರ ಬಳಿ ಹೋದರೂ ಅವರು ಹೇಳುವ ಮೊದಲ ಸಲಹೆ, "ಖರ್ಚು ಕಳೆದು ಉಳಿಯುವುದು ಉಳಿತಾಯ ಅಲ್ಲವೇ ಅಲ್ಲ". ಬದಲಾಗಿ ಆದಾಯದಲ್ಲಿ ಉಳಿತಾಯವನ್ನು ಕಳೆದು ಉಳಿದದ್ದು ಖರ್ಚಾಗಬೇಕು. ಅಂದರೆ ಖರ್ಚು ಕಳೆದು ಉಳಿದದ್ದು ಉಳಿತಾಯ ಎನ್ನುವುದು ತಪ್ಪು. ಖರ್ಚು ಮಾಡುವಾಗ ಮೊದಲು ನಾವು ಎಷ್ಟು ಉಳಿಸಬೇಕು ಎಂದುಕೊಂಡಿರುತ್ತೇವೆಯೋ ಅಷ್ಟನ್ನು ಉಳಿಸಿದ ನಂತರವೇ ಖರ್ಚು ಮಾಡಬೇಕು.


ಯಾಕೆ ಉಳಿಸಬೇಕು?
ಉಳಿಸಬೇಕು ಎಂದ ತಕ್ಷಣ ಪ್ರತಿಯೊಬ್ಬರೂ ಕೇಳುವ ಪ್ರಶ್ನೆ 'ಯಾಕೆ ಉಳಿಸಬೇಕು?". ನಿಜ, ಇವತ್ತು ಮಜಾ ಮಾಡಿ ಬಿಡೋಣ. ನಾಳೆ ಎನ್ನುವುದನ್ನು ಯಾರು ಕಂಡಿದ್ದಾರೆ? ನನ್ನ ಪಾಯಿಂಟ್ ಇರುವುದು ಇಲ್ಲಿಯೆ. ನಾಳೆ ಎನ್ನುವುದುದನ್ನು ಕಂಡವರು ಯಾರು? ನಾಳೆ ಏನು ಬೇಕಾದರೂ ಆಗಬಹುದು. ಆರೋಗ್ಯ ಹದಗೆಡಬಹುದು. ಕೆಲಸ ಹೋಗಬಹುದು. ಸಂಬಳ ಕಡಿಮೆಯಾಗಬಹುದು. ಸಂಬಳವೇ ಇಲ್ಲದಿರಬಹುದು. ಏನೂ ಬೇಕಾದರೂ ಆಗಬಹುದು. ಯಾರಿಗೆ ಗೊತ್ತು? ಅದಕ್ಕಾಗಿಯೇ ಉಳಿತಾಯ ಮಾಡಬೇಕು. ನಿರೀಕ್ಷಿತವಾದ ಕೆಲವು ಘಟನೆಗಳು ನಡೆದೇ ತೀರಬಹುದು. ಅಂತಹವುಗಳು ಯಾವುವು ಎಂಬುದನ್ನು ನೋಡೋಣ.


ಹಣದುಬ್ಬರ
ವರ್ಷದಿಂದ ವರ್ಷಕ್ಕೆ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಹಾಗಾಗಿ ಹಣದ ಮೌಲ್ಯ ಕಡಿಮೆಯಾಗಿತ್ತಿರುತ್ತದೆ. ಉದಾಹರಣೆಗೆ ಒಂದು ವರ್ಷದ ಹಿಂದೆ ಒಂದು ಸಾವಿರ ರೂಪಾಯಿಗಳಿಗೆ ಎಷ್ಟೆಲ್ಲ ವಸ್ತುಗಳು ಖರೀದಿಸಬಹುದಿತ್ತು. ಈಗ ಅಷ್ಟು ವಸ್ತುಗಳು ಖರೀದಿಸಲಾಗುವುದಿಲ್ಲ. ಅಂದರೆ ಕಳೆದ ವರ್ಷ 100 ರೂಪಾಯಿಗೆ ಒಂದು ಕೆಜಿ ಸೇಬು ಹಣ್ಣು ಬರುತ್ತಿದ್ದರೆ, ಈ ವರ್ಷ ಇದರ ಬೆಲೆ 110 ರೂಪಾಯಿ ಆಗಿರಬಹುದು. ಅಂದರೆ ಹಣದುಬ್ಬರದಲ್ಲಿ ಶೇಕಡಾ 10ರಷ್ಟು ಏರಿಕೆಯಾಗಿದೆ ಎಂದು ಅರ್ಥ. ಈ ಏರಿಕೆಗೆ ತಕ್ಕ ಹಾಗೆ ನಮ್ಮ ಸಂಬಳದಲ್ಲಾಗಲೀ ಆದಾಯದಲ್ಲಾಗಲೀ ಏರಿಕೆ ಆಗುವುದಿಲ್ಲ. ಇದೊಂದು ಕಟು ಸತ್ಯ. ಇದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಂಡೆ ಉಳಿತಾಯ ಮಾಡುತ್ತಿರಬೇಕು.

ತುರ್ತು ಸಂದರ್ಭ
ನಮ್ಮೆಲ್ಲರ ಜೀವನ ಒಂದೇ ರೀತಿ ಇರುವುದಿಲ್ಲ. ಏನು ಬೇಕಾದರೂ ಸಂಭವಿಸಬಹುದು. ಉದಾಹರಣೆಗೆ ಮಾಡುತ್ತಿರುವ ಕೆಲಸ ಹೋಗಬಹುದು. ಆಫೀಸಿನಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇಲ್ಲದೇ ಕೆಲಸ ಬಿಡಬೇಕಾಗಬಹುದು. ಇನ್ನೊಂದು ಕೆಲಸ ಸಿಗಲು ಕೆಲವು ತಿಂಗಳುಗಳೇ ಬೇಕಾಗಬಹುದು. ಆಗ ಸಂಸಾರ ನಿರ್ವಹಣೆ ಮಾಡಲು, ಅಂದರೆ ಮನೆ ಬಾಡಿಗೆ, ಗ್ಯಾಸ್, ದಿನಸಿ, ವಿದ್ಯುತ್/ನೀರಿನ ಬಿಲ್ ಹೀಗೆ ದಿನನಿತ್ಯದ ಎಷ್ಟೋ ಖರ್ಚು ವೆಚ್ಚಗಳಿರುತ್ತದೆ. ಅವುಗಳನ್ನೆಲ್ಲ ನಿಭಾಯಿಸಲೇ ಬೇಕು. ಇನ್ನೊಂದು ಕೆಲಸ ಸಿಗುವವರೆಗೆ, ಇನ್ನೊಂದು ಆದಾಯದ ದಾರಿ ಸಿಗುವವರೆಗೆ, ಜೀವನ ನಿರ್ವಹಿಸಲು ಕಷ್ಟವಾಗಬಾರದು. ಆಗ ಸಾಲ-ಸೋಲ ಮಾಡುವ ಪರಿಸ್ಥಿತಿ ಎದುರಾಗಬಾರದು. ಅವುಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯ ಮಾಡಲೇ ಬೇಕು.


ಕನಸು ನನಸಾಗಲು
ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕನಸಿರುತ್ತದೆ. ನಾಳೆ ಇವತ್ತಿಗಿಂತ ಚೆನ್ನಾಗಿ ಇರಬೇಕು ಎನ್ನುವ ಕನಸು. ಹೊಸ ಕಾರು ಖರೀದಿಸಬೇಕು, ಸ್ವಂತ ಮನೆ ಹೊಂದಬೇಕು. ನಗರಗಳಲ್ಲಿ ನಿವೇಶನ ಕೊಳ್ಳಬೇಕು. ಹೀಗೆ ಒಂದಿಲ್ಲೊಂದು ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ. ಈ ಎಲ್ಲ ಕನಸುಗಳ ಈಡೇರಿಕೆಗಾಗಿ ಒಂದು ಸಂಕಲ್ಪವನ್ನು ಮಾಡಬೇಕು. ಆ ಸಂಕಲ್ಪವೇನೆಂದರೆ, 'ಉಳಿತಾಯ ಮಾಡುವುದು'. ನಮ್ಮ ಜೀವನದಲ್ಲಿ ನಾವು ಇಟ್ಟುಕೊಂಡಂತಹ ಈ ಎಲ್ಲ ಕನಸುಗಳು ಈಡೇರುವುದಕ್ಕೆ ಮೂಲ ಬೀಜವೇ ಉಳಿತಾಯ. ನೀವು ಗಮನಿಸಿರಬಹುದು, ಉಳಿತಾಯ ಮಾಡಲಾಗದವರು ಯಾವುದೇ ಹೆಚ್ಚಿನ ಆಸ್ತಿ ಮಾಡುವುದೇ ಇಲ್ಲ.

ನಿರೀಕ್ಷಿತ ವೆಚ್ಚ
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮನೆಯಲ್ಲಿ ನಡೆಯುವ ಸಮಾರಂಭಗಳು, ಅದು ಮದುವೆ ಇತ್ಯಾದಿ ಇರಬಹುದು. ಇವೆಲ್ಲವೂ ನಿರೀಕ್ಷಿತ ವೆಚ್ಚಗಳು. ಮಕ್ಕಳ ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣ ಈಗ ದುಬಾರಿಯದ್ದಾಗಿದೆ. ಉತ್ತಮ ಶಿಕ್ಷಣ ಇದ್ದಾಗ ಮಾತ್ರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಹಾಗಾಗಿ ಮಕ್ಕಳ ಶಿಕ್ಷಣಕ್ಕೆ ಅಂದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡಲೇ ಬೇಕು.


ನಿವೃತ್ತಿ
ಎಲ್ಲರ ಜೀವನದಲ್ಲೂ ನಿವೃತ್ತಿ ಇದ್ದೇ ಇರುತ್ತದೆ. ಖಾಸಗಿ ಕಂಪನಿಗಳಲ್ಲಿ ಕೆಲಸದಲ್ಲಿದ್ದರಂತೂ ನಿವೃತ್ತಿ ವೇತನ ಇಲ್ಲವೇ ಇಲ್ಲ. ನಿವೃತ್ತಿ ಆದರೂ ನಮ್ಮ ಖರ್ಚುಗಳೇನೂ ನಿವೃತ್ತಿಯಾಗುವುದಿಲ್ಲ. ಬದಲಾಗಿ ಖರ್ಚು ಇನ್ನೂ ಹೆಚ್ಚಾಗಿರುತ್ತದೆ. ದುಡಿಯುವಾಗ ಉಳಿಸಿದರೆ ಮಾತ್ರ ಅದು ನಿವೃತ್ತಿಯ ಸಮಯದಲ್ಲಿ ನಮ್ಮನ್ನು ಕಾಪಾಡುತ್ತದೆ. ಅದಿಲ್ಲದಿದ್ದರೆ ನಿವೃತ್ತಿಯ ಇಳಿಗಾಲ ಬಹಳ ಕಷ್ಟದ ಕಾಲವಾಗಲಿದೆ.

ಆರೋಗ್ಯ
ಇತ್ತೀಚಿನ ವರ್ಷಗಳಲ್ಲಿ ನಮ್ಮೆಲ್ಲರೆದುರಿರುವ ಬಹುದೊಡ್ಡ ಸವಾಲು ಎಂದರೆ 'ಆರೋಗ್ಯ'. ಈಗ ಎಲ್ಲದಕ್ಕೂ ಔಷಧಿಗಳಿವೆ ಎಂದು ನಮಗೆ ತಿಳಿದಿದೆ. ಆದರೆ ಅವುಗಳು ದುಬಾರಿಯಾಗಿವೆ. ಆರೊಗ್ಯ ವಿಮೆ ಇರಬಹುದು, ಆದರೆ ಈ ವಿಮೆ ಕೆಲವೇ ಖಾಯಿಲೆಗಳಿಗೆ ಅನ್ವಯಿಸುತ್ತದೆ. ಅಷ್ಟೇ ಅಲ್ಲ, ಎಲ್ಲ ಹಣವೂ ಮರುಪಾವತಿಯಾಗುವುದಿಲ್ಲ. ಹಾಗಾಗಿ ನಾವು ಹಣ ಉಳಿಸಿದರೆ ಮಾತ್ರ ನಮ್ಮ ಅನಾರೋಗ್ಯದ ಸಂದರ್ಭದಲ್ಲೂ ಹೆಚ್ಚಿನ ಒತ್ತಡ ಇಲ್ಲದೇ ಇರಬಹುದು. ಹಣ ಉಳಿಸಿದಾಗ ಅದು ನೀಡುವ ಭದ್ರತೆಯ ಭಾವನೆಯಿಂದಲೇ, ನಾವು ಹೆಚ್ಚು ನೆಮ್ಮದಿಯಾಗಿ ಇರುತ್ತೇವೆ. ಆರೋಗ್ಯಪೂರ್ಣ, ನೆಮ್ಮದಿಯ ಮತ್ತು ಗುಣಮಟ್ಟದ ಜೀವನಕ್ಕೆ ಉಳಿತಾಯ ಬೇಕೇ ಬೇಕು ಎನ್ನುವುದು ನೆನಪಿಡಿ.


-ಶ್ರೀಕಾಂತ್ ಮಾತೃಬಾಯಿ,
ಕಾರ್ಯ ನಿರ್ವಾಹಕ ನಿರ್ದೇಶಕರು,
ಶ್ರೀಕವಿ ವೆಲ್ತ್, 
ಆರ್ಥಿಕ ಸಲಹೆಗಾರರು.


English Version of this article







Sunday 26 April 2020

HOW TO REMAIN POOR ALWAYS ? ಬಡವರಾಗಿಯೇ ಉಳಿಯುವುದು ನಮ್ಮದೇ ಆಯ್ಕೆ

ಬಡವರಾಗಿಯೇ ಉಳಿಯುವುದು ಯಾರಿಗೆ ಇಷ್ಟ?
ಶ್ರೀಮಂತರಾಗುವುದಕ್ಕೆ ಎಲ್ಲರಿಗೂ ಆಸೆ ಇದೆ. ಆದರೆ ಆಸೆಯೇನೋ ಶ್ರೀಮಂತರಾಗುವುದಕ್ಕೆ ಇದೆಯೋ ಹೊರತು ವರ್ತನೆ ಮಾತ್ರ ಬಡವರಾಗುವುದಕ್ಕೆ ಪೈಪೋಟಿ ನಡೆಸಿದ ಹಾಗೆ ಇದೆ. ಬಡವರಾಗಿಯೇ ಉಳಿಯುವ ಮಹಾನುಭಾವರ ವರ್ತನೆಗಳು ಹೇಗಿರುತ್ತವೆ ಎನ್ನುವುದನ್ನು ಉದಾಹರಣೆಗಳ ಮೂಲಕವೇ ಅರಿಯೋಣ. ಹಾಗೆ ಅರಿಯುತ್ತಲೇ ನಾವು ಎಲ್ಲಿದ್ದೇವೆ ಎನ್ನುವುದನ್ನೂ ನೋಡಿಕೊಳ್ಳೋಣ. ನಾವೇ ಮಾಡುವ ತಪ್ಪುಗಳನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯೋಣ. ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು, ನಾವು ಶ್ರೀಮಂತರಾಗಬೇಕಾದರೆ; ಬಡವರಾಗಿ ಉಳಿಯುವುದಕ್ಕೆ ಏನು ಮಾಡುತ್ತೇವೋ ಅದನ್ನು ಮಾಡಬಾರದು.
How to get out of Poverty to become rich in Life
1.  ಪಕ್ಕದ ಮನೆಯವರು ಹೊಸದಾಗಿ ಆರಂಭವಾದ ಷೋರಂನಿಂದ 42 ಇಂಚಿನ ಟಿವಿ ಖರೀದಿಸಿರೋ, ಆಗ ಸುಮ್ಮನಿರದೆ ಅವರಿಗಿಂತ ತಾನೇನು ಕಡಿಮೆ ಎನ್ನುತ್ತಾ, ಅವರಿಗಿಂತ ಕಡಿಮೆ ಆದಾಯವಿದ್ದರೂ, ಅವರೆದುರು ತೋರಿಸುವುದಕ್ಕಾದರೂ ಅವರ ಹೊಟ್ಟೆ ಉರಿಸುವುದಕ್ಕಾದರೂ, 62 ಇಂಚಿನ ಟಿವಿ ಖರೀದಿಸುವವರು ಬಡವರಾಗುವುದಕ್ಕೆ ಪೈಪೋಟಿ ನಡೆಸುತ್ತಾರೆ.


2.  ಈ ಬಾರಿ IPLನಲ್ಲಿ RCBಯೇ ಗೆಲ್ಲುವುದು, ಅನುಮಾನವೇ ಇಲ್ಲ. ಏನಂತ ಈಗ ಒಂದು ತಿಂಗಳ ಸಂಬಳವನ್ನು ಬೆಟ್ ಕಟ್ತುತ್ತೇನೆ. ಹೇಗಿದ್ದರೂ ನನ್ನ ಪರಿಣಿತಿ ಪ್ರಶ್ನಿಸುವೆ ಹಾಗಿಲ್ಲ. ನಾನೇ ಗೆಲ್ಲುವುದು. ಒಂದೇ ಶಾಟ್ ನಲ್ಲಿ ಆರು ತಿಂಗಳ ಸಂಬಳ ಬಂದರೆ ಬಿಡುವುದು ಯಾಕೆ? ಅಷ್ಟಕ್ಕೂ ನಾನೊಬ್ಬ ಒಳ್ಳೆಯ ಕ್ರಿಕೆಟ್ ವಿಶ್ಲೇಷಕ!


3.  ಸ್ನೇಹಿತ ತನ್ನ ಕುಟುಂಬ ಸಮೇತ ನೇಪಾಳಕ್ಕೆ ಹೋಗಿ ಬಂದೆ ಎನ್ನುವ ಹಮ್ಮು ಅವನಿಗೆ. ಒಮ್ಮೆಯೂ ಕರೆಯಲಿಲ್ಲ. ನಾನೇನು ಕಡಿಮೆ. ನಾನೂ ಸಂಸಾರ ಸಮೇತ ಸಿಂಗಪೂರ, ದುಬೈಗಳಿಗೆ ಹೋಗಿ ಬರುತ್ತೇನೆ.


4.  ಹೆಂಡತಿ ಈ ನಡುವೆ ಮುನಿಸಿಕೊಳ್ಳುತ್ತಿದ್ದಾಳೆ. ಹೇಗಿದ್ದರೂ ಅವಳ ಹುಟ್ಟಿದ ದಿನ ಹತ್ತಿರ ಬಂದಿದೆ. ಅವಳನ್ನೂ ಸಮಾಧಾನಿಸಲು ಒಂದು ಅವಕಾಶ. ಅವಳಿಗೊಂದು ಚಿನ್ನದ್ದೋ, ವಜ್ರದ್ದೋ ಬೆಲೆಬಾಳುವ ಉಡುಗೊರೆ ಕೊಡಿಸಿದರಾಯಿತು. ಹೇಗಿದ್ದರೂ ಒಟ್ಟಿಗೆ ಹಣ ನೀಡಬೇಕಿಲ್ಲ. ಕಂತುಗಳಲ್ಲಿ ಕಟ್ಟಿದರಾಯಿತು. ಹೆಂಡತಿಗೆ ಕೊಡಿಸದೇ ಇನ್ಯಾರಿಗೆ ಕೊಡಿಸಲಿ?



5.  ನಗರದ ಹೊರವಲಯದಲ್ಲಿ ನನ್ನ ಸ್ನೇಹಿತ ಸೈಟ್ ಖರೀದಿಸಿದ. ಅವನು ತೆಗೆದುಕೊಂಡ ಅಂದರೆ ನಾನು ಯಾವುದೇ ಅನುಮಾನವಿಲ್ಲದೇ ಕೊಳ್ಳಬಹುದು ಯಾಕೆಂದರೆ ಅವನು ಬೇಕಾದಷ್ಟು ಸೈಟ್ ಖರೀದಿಸಿ ಅನುಭವ ಇರುವವನು. ಅವನೇ ಹೂಡಿಕೆ ಮಾಡಿದ್ದಾನೆ ಎಂದ ಮೇಲೆ ಮತ್ತೊಮ್ಮೆ ಪರಿಶೀಲಿಸುವ ಅಗತ್ಯ ಇಲ್ಲವೇ ಇಲ್ಲ.



6. . ನಾನು FDಯಲ್ಲಿ ಇಟ್ಟ ಹಣ ಕೇವಲ ಶೇಕಡಾ 8ರಷ್ಟು ಮಾತ್ರ ಗಳಿಸುತ್ತಿದೆ. ದಿನವೂ ಪತ್ರಿಕೆಯಲ್ಲಿ ಚಿಟ್-ಫಂಡ್ ಜಾಹೀರಾತು ಬರುತ್ತಿದೆ. ಶೇಕಡಾ 20ರಷ್ಟು ಬಡ್ಡಿ ಕೊಡುವಾಗ ನಾನೇಕೆ ಬಿಡಲಿ? ಅಲ್ಲಿ ಹಣ ಹಾಕಿದ ಅಷ್ಟೇಲ್ಲಾ ಜನರಿರುವಾಗ, ಅವರೇನೂ ದಡ್ಡರೇ? ನಾನು ಸುಮ್ಮನೇ ಇಷ್ಟು ಕಡಿಮೆ ಬಡ್ಡಿ ಪಡೆದು ಯಾಕೆ ಸಂತೃಪ್ತಿ ಹೊಂದಬೇಕು?



7.  ದಿನ ದಿನವೂ ಖರ್ಚಿನ ವೆಚ್ಚದ ಡೈರಿ ಯಾಕೆ ಬರೆಯಬೇಕು? ಕಷ್ಟವಾದರೆ ಸಾಲ ನೀಡುವ ಸ್ನೇಹಿತರು ಇರುವಾಗ ನಾನೇಕೆ ಯೋಚಿಸಬೇಕು? ಈಗಂತೂ ಕ್ರೆಡಿಟ್ ಕಾರ್ಡ್ ಇದೆಯಲ್ಲ?




8.  ಆರೋಗ್ಯ ವಿಮೆಯ ಅಗತ್ಯತೆ ನನಗಿಲ್ಲ. ನಮ್ಮ ತಾತ 91 ವರ್ಷ ಬದುಕಿದ್ದರು. ನಮ್ಮ ತಂದೆಗೆ ಈಗ 70 ವರ್ಷ, ಅವರೂ ಆರೋಗ್ಯವಾಗಿದ್ದರೆ. ಆರೋಗ್ಯ ವಿಮೆಯ ಕಂತು ನಾನೇಕೆ ಕಟ್ಟಲಿ?


9.  ಮ್ಯೂಚುವಲ್ ಫಂಡಿನಲ್ಲಿ ಯಾರಪ್ಪಾ ಹಣ ತೊಡಗಿಸುತ್ತಾರೆ? ಅಷ್ಟು ದೀರ್ಘ ಅವಧಿಗೆ ಹಣ ತೊಡಗಿಸುವುದರ ಬದಲು ಷೇರು ಮಾರುಕಟ್ಟೆಯಲ್ಲಿ ಡೇ ಟ್ರೇಡಿಂಗ್ ಮಾಡಿದರೆ ಬೇಗ ಬೇಗ ಹಣ ಸಂಪಾದಿಸಬಹುದು.



10.  ಆರ್ಥಿಕ ಸಲಹೆಗಾರರು ನಮಗೇಕೆ? ಗೂಗಲ್ ಅಲ್ಲೇ ಎಲ್ಲವೂ ಸಿಗುವಾಗ; ಮಾಹಿತಿ ಬೆರಳತುದಿಯಲ್ಲಿ ಇರುವಾಗ ಅವರ ಅಗತ್ಯತೆಯೇ ಇಲ್ಲ.



ಈ ಮೇಲಿನ ಅಂಶಗಳು 'ಯಾರು ಬಡವರಾಗಿಯೇ ಉಳಿಯಲು ಬಯಸುತ್ತಾರೋ' ಅವರಿಗಾಗಿ ಮಾತ್ರ.

ಎಂದಿಗೂ ಅತಿ ಶೀಘ್ರದಲ್ಲಿ ಶ್ರೀಮಂತರಾಗುವ ಬಯಕೆಯನ್ನು ಹೊಂದಬೇಡಿ ಹಾಗೂ ಜನಸಮೂಹವನ್ನು ಅನುಸರಿಸಬೇಡಿ.

ಆರ್ಥಿಕತೆಯ ಬಗ್ಗೆ ಸಮರ್ಥ ಜ್ಞಾನವುಳ್ಳ ಹಾಗು ನಿಮ್ಮ ಹಿತವನ್ನು ಕಾಪಾಡುವ ವ್ಯಕ್ತಿಯ ಮಾರ್ಗದರ್ಶನವನ್ನು ಪಡೆಯಿರಿ.

ನಿಮಗೆ ಒಳ್ಳೆಯದಾಗಲಿ.

ವಂದನೆಗಳು,

ಶ್ರೀಕಾಂತ್ ಮಾತೃಬಾಯಿ,
ಕಾರ್ಯ ನಿರ್ವಾಹಕ ನಿರ್ದೇಶಕರು,
ಶ್ರೀಕವಿ ವೆಲ್ತ್, 

www.srikaviwealth.com



You can subscribe to my TELEGRAM channel 
Become Wealthy by following the habits of what the Wealthy do. 
Join my Channel WEALTHY HABITS and change your habits and have only WEALTHY HABITS. 
http://t.me/joinchat/AAAAAEh49fBN2bkUQnFKIQ

If you have already downloaded Telegram App just type https://t.me/WealthyHabits and JOIN

You are strongly encouraged to consult your financial planner before taking any decision regarding this investment. The views expressed here is the authors personal views and should not be intrepresented as a recommendation to invest/avoid.


Srikanth Matrubai Author of the Amazon Best Seller DON'T RETIRE RICH

Do read the book and give your valuable feedback and request you to post positive comments on the Amazon. https://amzn.to/3cHUM6M/ You can purchase the book on amazon and flipkart


Request my readers (specially Kannada readers) to subscribe the magazine PROFIT PLUS

Sunday 26 January 2020

ಜುಟ್ಟಿಗೆ ಮಲ್ಲಿಗೆ ಏಕೆ? - WANT LAVISH WEDDING ?

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಬೇಕೆ? ಸಾಲ ಮಾಡಿ ಮದುವೆ ಮಾಡುವುದು ಈಗ ಅನಿವಾರ್ಯ ಎನ್ನುವ ಹಾಗೆ ವರ್ತಿಸುತ್ತಿದ್ದೇವೆ. ಬೇರೆಯವರ ಎದುರು ನಾವೇನೂ ಕಡಿಮೆಯಲ್ಲ ಎಂದು ತೋರಿಸಿಕೊಳ್ಳುವ, ಸ್ಪರ್ಧೆಯ ಭಾವನೆಯಿಂದಲೇ ನಮ್ಮ ಮದುವೆ ದುಂದು ವೆಚ್ಚರ ಆಚರಣೆ ಆಗುತ್ತಿದೆ. ಸರಳ ಮದುವೆಗೇಕೆ ಸಂಕೋಚ?












ಉದ್ಯಮಿ ಮುಖೇಶ್ ಅಂಬಾನಿ ಮಗಳ ಅದ್ದೂರಿ ಮದುವೆ ಮಾಧ್ಯಮಗಳಲ್ಲಿ ಬಹಳ ಸುದ್ದಿ ಮಾಡಿತ್ತು. ಮದುವೆಯ ಖರ್ಚುವೆಚ್ಚಗಳ ಬಗೆಗೆ ಮಾತುಗಳು, ವಿಶೇಷತೆಯ ವರ್ಣನೆಗಳು ಎಲ್ಲವೂ ಆದವು. ಮುಖೇಶ್ ಅಂಬಾನಿ ಆಗರ್ಭ ಶ್ರೀಮಂತ. ಅವರ ಮಗಳ ಮದುವೆಗೆ ಎಷ್ಟಾದರೂ ಖರ್ಚು ಮಾಡಲಿ ಬಿಡಿ. ಹಾಗೆಂದು ಶ್ರೀಮಂತರು ತಮ್ಮ ಮಕ್ಕಳ ಮದುವೆಗೆ ಭಾರೀ ಪ್ರಮಾಣದಲ್ಲಿ ವೆಚ್ಚ ಮಾಡಬೇಕು ಎಂದೇನೂ ಅಲ್ಲ. ಎಲ್ಲರೂ ಹಾಗಿರುವುದಿಲ್ಲ. ಆದರೆ ನಾವು ಇಲ್ಲಿ ಒತ್ತಿ ನೀಡುತ್ತಿರುವುದು, ಶ್ರೀಮಂತರೇನೋ ವಿಜೃಂಭಣೆಯ ಮದುವೆ ಮಾಡುತ್ತಾರೆ. ಆದರೆ ಬಡವರು, ಮಧ್ಯಮ ವರ್ಗದವರು ಇಂತಹ ಅಬ್ಬರಗಳಿಗೆ ಮಾರು ಹೋಗಿ ತಾವೂ ತಮ್ಮ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದು ಬಯಸುತ್ತಾರಲ್ಲ, ಅದರ ಬಗ್ಗೆ ಬರೆಯುತ್ತಿರುವೆ.

ಮುಖೇಶ್ ಅಂಬಾನಿ ತನ್ನ ಮಗಳ ಮದುವೆಗೆ 800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಅಸಲಿಗೆ ಅವರ ಒಂದು ತಿಂಗಳ ಸಂಪಾದನೆಯನ್ನು ಅವರು ಮಗಳ ಮದುವೆಗಾಗಿ ಖರ್ಚು ಮಾಡಿದ್ದಾರೆ. ಹಾಗಾದರೆ ನಾವೂ ಕೂಡ ಇದೇ ರೀತಿಯಿಂದ ಯೋಚಿಸಿದರೆ? ಒಂದು ತಿಂಗಳ ಸಂಪಾದನೆಯಲ್ಲಿ ಮದುವೆ ಇರಲಿ ಮಕ್ಕಳ ಹುಟ್ಟುಹಬ್ಬವನ್ನೂ ಮಾಡಲಾಗುವುದಿಲ್ಲ.

ಈಗ ವಿವಾಹದ ಸ್ವರೂಪವೇ ಸಂಪೂರ್ಣವಾಗಿ ಬದಲಾಗುತ್ತಿದೆ. ವಿವಾಹ ಎನ್ನುವುದು ಹೊಸ ಜೀವನಕ್ಕೆ ಕಾಲಿಡುತ್ತಿರುವ ಹುಡುಗ-ಹುಡುಗಿಗೆ ಎರಡೂ ಕುಟುಂಬದವರು ಸೇರಿ ಒಮ್ಮತದಿಂದ ನಡೆಸಿಕೊಡುವ ಆಶೀರ್ವಾದ, ಅವರಿಬ್ಬರ ದಾಂಪತ್ಯ ಬದುಕು ಸುಖಕರವಾಗಿರಲಿ ಎನ್ನುವ ಆಶಯ ಇಲ್ಲಿ ಬಹಳ ಮುಖ್ಯ.

ಮದುವೆ ಕೇವಲ ಇಬ್ಬರು ವ್ಯಕ್ತಿಗಳ ನಡುವೆ ಅಲ್ಲ. ಬದಲಾಗಿ ಎರಡು ಕುಟುಂಬಗಳ ನಡುವೆ ನಡೆಯುವಂತಹದ್ದು. ಹಾಗಾಗಿ ಮದುವೆಗೆ ಆಪ್ತರ ಆಗಮನವಿರಬೇಕು. ಸರಳ ಮದುವೆ ಅಗತ್ಯ. ಆದರೆ ಅದ್ದೂರಿ ಮದುವೆ ಅನಿವಾರ್ಯವಾಗಿಸಿದ್ದೇವೆ.

ಮದುವೆ ಈಗ ಇವೆಂಟ್ ಆಗಿದೆ. ಮದುವೆ ಹೇಗಿರಬೇಕು ಎಂದು ಡಿಸೈನ್ ಮಾಡುತ್ತಾರೆ. ಫೋಟೋ ಅಲಂಕಾರ, ವಿಧ-ವಿಧದ ಉಡುಪು, ತರಹೇವಾರಿ ಊಟ ತಿಂಡಿ, ಆಮದು ಮಾಡಿಕೊಂಡ ವಸ್ತುಗಳು, ವಿಶೇಷ ವಿನ್ಯಾಸದ ಮಂಟಪ, ವೇದಿಕೆ ಹೀಗೆ ಮದುವೆ ಎನ್ನುವುದು ನಮ್ಮ ಒಣ ಪ್ರತಿಷ್ಟೆಯ ಅಖಾಡವಾಗಿದೆ.

ಈಗ ಬೇರೆ ಊರುಗಳಿಗೆ ಹೋಗಿ ಮದುವೆ ಮಾಡಿಕೊಳ್ಳುವುದು, ರಾಜ ಮಹಾರಾಜರ ರೀತಿಯ ಮದುವೆಗಳು, ಸಮುದ್ರದ ತೀರದಲ್ಲಿ ಮದುವೆ ನಡೆಸುವುದು, ಆಕಾಶದಲ್ಲಿಯೂ ಮದುವೆಗಳು ಆಗುತ್ತಿದೆ.

ಪ್ರತಿಯೊಬ್ಬರಿಗೂ ವಿಶೇಷವಾಗಿರಬೇಕು. ವಿನೂತನವಾಗಿರಬೇಕು ಎನ್ನುವ ಹಂಬಲ. ಮದುವೆ ಮಾಡಿ ಮುಗಿಸಿದ ನಂತರ ದಿನನಿತ್ಯದ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸಲು, ಕಷ್ಟಗಳು ಎದುರಾದರೆ ಅವೆಲ್ಲವನ್ನೂ ಪರಿಹರಿಸಲು ಮದುವೆಗೆ ಬಂದು ಹೊಗಳಿ ಹೋದವರು ಬರುತ್ತಾರೆಯೇ? ಖಂಡಿತ ಇಲ್ಲ. ಹಾಗಾದರೆ ನಾವು ಮದುವೆಯನ್ನು ಯಾಕಿಷ್ಟು ವಿಜೃಂಭಣೆಯಿಂದ ಮಾಡುತ್ತೇವೆ. DVGಯವರು ಹೇಳುವ ಹಾಗ 
"ಮನ್ನಣೆಯ ದಾಹ, ತನ್ನನ್ನು ತಾನು ಈ ಮೂಲಕ ಎತ್ತರಕ್ಕೆ ಏರಿಸಿಕೊಂಡು, ಎಲ್ಲರೂ ಬೆರಗಾಗುವ ಹಾಗೆ ಮಾಡಿದೆ ಎನ್ನುವ ಪ್ರತಿಷ್ಟೆಯ ಹುಚ್ಚು ಬಿಟ್ಟರೆ ಬೇರೆ ಇಲ್ಲ"

ನಮ್ಮ ಸಂಪಾದನೆಯಲ್ಲಿ ಎಷ್ಟು ಪ್ರಮಾಣದ ಹಣ ಇದಕ್ಕಾಗಿ ಖರ್ಚು ಮಾಡಬೇಕು ಎನ್ನುವ ಸ್ಪಷ್ಟ ಅರಿವು ನಮಗೆ ಇರಲೇ ಬೇಕು.

ಮುಖೇಶ್ ಅಂಬಾನಿ ತನ್ನ ಮಗಳ ಮದುವೆಗೆ ೮೦೦ ಕೋಟಿ ರೂಪಾಯಿ ಖರ್ಚು ಮಾಡಿದ್ದು ನಿಜ. ಆದರೆ ಅವರ ಒಟ್ಟೂ ಆದಾಯ 3,15,000 ಕೋಟಿ ರೂಪಾಯಿಗಳು. ಅಂದರೆ ಅವರ ನಿವ್ವಳ ಆದಾಯದ ಶೇಕಡಾ 0.25 ಮಾತ್ರ ಅವರು ತಮ್ಮ ಮಗಳ ಮದುವೆಗಾಗಿ ಖರ್ಚು ಮಾಡಿರುತ್ತಾರೆ. ನಾವು ಸಾಮಾನ್ಯರು ನಮ್ಮ ಸಂಪಾದನೆಯ ಶೇಕಡಾ 50 ಭಾಗದಷ್ಟು ಖರ್ಚು ಮಾಡುತ್ತೇವೆ. ಅಷ್ಟೇ ಅಲ್ಲದೇ ಸಾಲ ಮಾಡಿ ಮದುವೆ ಮಾಡುತ್ತೇವೆ. ಸಾಲಕ್ಕೆ ಅಧಿಕ ಬಡ್ಡಿ ಕಟ್ಟುತ್ತೇವೆ. ಅಂತೂ ಚೆನ್ನಾಗಿ ಮದುವೆ ಮಾಡಿದೆ ಎಂದು ಬೀಗುತ್ತೇವೆ. ನಮಗೆ ಗೊತ್ತಿಲ್ಲದೇ ನಾವೇ ನಮ್ಮ ಗುಣಮಟ್ಟದ ಜೀವನಕ್ಕೆ ತಿಲಾಂಜಲಿ ಇಡುತ್ತೇವೆ.

WATCH THIS VIDEO .....IT WILL DEFINITELY HELP


http:/http://https://www.youtube.com/watch?v=D9_uiMOdTnM/



ಮದುವೆಗೆ ಮಾಡಬಹುದಾದ ಖರ್ಚಿನ ಬದಲು ದಂಪತಿಗಳಿಗೆ ಒಳ್ಳೆಯ ಷೇರುಗಳಲ್ಲಿ, ಮ್ಯೂಚುವಲ್ ಫಂಡಿನಲ್ಲಿ ಹಣ ತೊಡಗಿಸಿ.ಹೀಗೆ ತೊಡಗಿಸಿದ ಹಣ ಮುಂದೆ ಅವರ ಮಕ್ಕಳ ಮದುವೆಯ ಖರ್ಚನ್ನೂ ನಿಭಾಯಿಸುವಷ್ಟು ಸಶಕ್ತವಾಗಿರುತ್ತದೆ.

ಸರಳ ಮದುವೆ ಎಂದಾಗ ಇದಕ್ಕೆ ಯಾರು ಮುಂದಾಗಬೇಕು? ಸರಳ ಮದುವೆ ಎಂದರೆ ಇವರೆಷ್ತು ಜಿಪುಣರು ಎನ್ನಬಹುದು. ದುಡ್ಡಿಲ್ಲ ಎಂದುಕೊಳ್ಳಬಹುದು. ಇರುವ ಒಬ್ಬನ್ನೇ ಮಗನೋ/ಮಗಳೋ ಇರುವಾಗ ಇಷ್ಟೊಂದು ಸರಳವಾಗಿ ಮಾಡುವುದು ಸರಿಯೇ? ಎನ್ನಬಹುದು. ಬೇರೆಯವರು ಸರಳವಾಗಿ ಮದುವೆ ಮಾಡಿಕೊಂಡರೆ ಮೆಚ್ಚುತ್ತೇವೆ. ಹಾಗೆ ನೋಡಿದರೆ ಸಂಪಾದನೆಗೂ ಖರ್ಚಿಗೂ ಹೋಲಿಸಿದರೆ ಮುಖೇಶ್ ಅಂಬಾನಿಯವರ ಮಗಳ ಮದುವೆ ಸರಳವೇ!


-ಶ್ರೀಕಾಂತ್ ಮಾತೃಬಾಯಿ,
ಕಾರ್ಯ ನಿರ್ವಾಹಕ ನಿರ್ದೇಶಕರು,
ಶ್ರೀಕವಿ ವೆಲ್ತ್,
ಆರ್ಥಿಕ ಸಲಹೆಗಾರರು.


The English version of the article is

http://www.goodfundsadvisor.in/2018/12/want-to-have-lavish-wedding-go-ahead-but.html



You can subscribe to my TELEGRAM channel 
Become Wealthy by following the habits of what the Wealthy do. 
Join my Channel WEALTHY HABITS and change your habits and have only WEALTHY HABITS. 
http://t.me/joinchat/AAAAAEh49fBN2bkUQnFKIQ

If you have already downloaded Telegram App just type https://t.me/WealthyHabits and JOIN



Request my readers (specially Kannada readers) to subscribe the magazine PROFIT PLUS




You can send an email to them at profitpluskannada@gmail.com and/or mediam146@gmail.com

Tuesday 21 January 2020

ಸಿಪ್ ಸುಲಭ - SIP IS EASY AND BETTER OPTION

ಹಣ ಸಂಪಾದಿಸಿರೆ ಸಾಲದು, ಉಳಿಸಬೇಕು. ಉಳಿಸಿದ ಹಣವನ್ನು ಬೆಳೆಸಬೇಕು. ಹೇಗೆ ಬೆಳೆಸಬೇಕು? ಹಣವನ್ನು ಹೂಡಿಕೆ ಮಾಡುವುದರಿಂದ ಮಾತ್ರ ಬೆಳೆಸಲು ಸಾಧ್ಯ. ಹೇಗೆ ಆರ್ಥಿಕ ಭದ್ರತೆ ಸಾಧಿಸಬಹುದು ಎನ್ನುವುದರ ವಿವಿರ ಇಲ್ಲಿದೆ.
ನನಗೆ ಈಗ ಇಪ್ಪತ್ತಮೂರು ವರ್ಷ. ಇತ್ತೀಚೆಗೆಷ್ಟೇ ಕೆಲಸಕ್ಕೆ ಸೇರಿರುವೆ. ನಾನು ಯಾವ ರೀತಿಯಿಂದ ಹೂಡಿಕೆ ಮಾಡಬೇಕು? ಆರ್ಥಿಕ ಭದ್ರತೆ ಹೊಂದುವುದು ಹೇಗೆ?

-ನಿತಿನ್ ನಾಯಕ್, ಶಿರಸಿ.






ಉತ್ತರ: 

ಮೊಟ್ಟಮೊದಲು ನಾನು ನಿಮ್ಮನ್ನು ಅಭಿನಂದಿಸುವೆ. ಸಾಮಾನ್ಯವಾಗಿ ನಿಮ್ಮ ವಯಸ್ಸಿನವರು ಕೆಲಸಕ್ಕೆ ಸೇರಿದ ತಕ್ಷಣ ಯೋಚಿಸುವುದು ಹೊಸ ಮೊಬೈಲ್ ಮತ್ತು ಬೈಕ್ ಕೊಳ್ಳುವ ಬಗೆಗೆ. ನೀವು ಹಣ ಹೂಡಿಕೆಯ ಬಗೆಗೆ, ಅದರಲ್ಲೂ ಆರ್ಥಿಕ ಭದ್ರತೆಯ ಬಗೆಗೆ ಪ್ರಶ್ನೆಗಳನ್ನು ಕೇಳಿದ್ದೀರಿ. ಹಾಗಾಗಿ ನಾನು ನಿಮ್ಮನ್ನು ಅಭಿನಂದಿಸುವೆ. ಚಿಕ್ಕ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದ್ದೀರಿ. ಹಾಗೆಯೇ ಚಿಕ್ಕ ವಯಸ್ಸಿನಲ್ಲಿ ಹೂಡಿಕೆಯ ಬಗ್ಗೆ ಯೋಚಿಸುತ್ತಿದ್ದೀರಿ. ಚಿಕ್ಕ ವಯಸ್ಸಿಯನಲ್ಲಿ ಮಾಡುವ, ದೀರ್ಘ ಕಾಲದ ಹೂಡಿಕೆ ಅಧಿಕ ಲಾಭವನ್ನು ತಂದುಕೊಡಲಿದೆ.

ಹೂಡಿಕೆಯ ಬಗೆಗೆ ಯೋಚಿಸುವುದಕ್ಕೂ ಮೊದಲು ನೀವು ನಿಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು. ಅಂದರೆ ಮೊಟ್ಟ ಮೊದಲು ನೀವು ಒಂದು ಇನ್ಯುರೆನ್ಸ್ ಪಾಲಿಸಿಯನ್ನು ಹೊಂದಲೇ ಬೇಕು. ಕೆಲಸಕ್ಕೆ ಸೇರಿದ ತಕ್ಷಣ ಪ್ರತಿಯೊಬ್ಬರೂ ವಿಮಾ ಪಾಲಿಸಿಯ ಬಗ್ಗೆ ಯೋಚಿಸುತ್ತಾರೆ. ವಿಮೆಯಲ್ಲಿ ಹಲವು ರೀತಿಯ ವಿಮೆಗಳಿಎ. ಅವಧಿ ವಿಮಾ ಪಾಲಿಸಿಯನ್ನು ಪಡೆಯುವುದು ಸೂಕ್ತ. ಜೀವವಿಮೆಯಲ್ಲೂ ಎಂಡೋಮೆಂಟ್ ಅಥವಾ ಮನಿಬ್ಯಾಕ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಬೇಡ. ಹಾಗಾಗಿ ವಿಮೆ ಪಡೆಯುವಾಗಲೂ ಅದರ ಬಗೆಗೆ ಸರಿಯಾಗಿ ತಿಳಿಯುವುದು ಆವಶ್ಯಕ.


ಜೀವವಿಮೆಯ ಹಾಗೆ ಅತ್ಯಂತ ಪ್ರಮುಖವಾದದ್ದು ಆರೋಗ್ಯ ವಿಮೆ. ಹೆಲ್ತ್ ಇನ್ಷುರೆನ್ಸ್ ಇಡಿ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು. ಆರೋಗ್ಯ ವಿಮೆಯಲ್ಲಿಯೂ ಬೇಕಾದಷ್ಟು ಆಯ್ಕೆಗಳಿವೆ. ಕೆಲಸಕ್ಕೆ ಸೇರಿದವರು ಮೊದಲು ಜೀವವಿಮೆ ಮತ್ತು ಆರೋಗ್ಯ ವಿಮೆಯಲ್ಲಿ ಹಣ ತೊಡಗಿಸಲೇ ಬೇಕು. ಇವು ಯಾವುವೂ ಹೂಡಿಕೆ ಎಂದು ಪರಿಗಣಿಸಬೇಡಿ. ಇವೆಲ್ಲವೂ ಭದ್ರತೆ ಮತ್ತು ಸುರಕ್ಷಿತತೆಯ ದೃಷ್ಟಿಯಿಂದ ಅಗತ್ಯ. ಆರ್ಥಿಕ ಹೊರೆ ಆಗದ ಹಾಗೆ ಎಚ್ಚರ ವಹಿಸುವುದು ಇಲ್ಲಿರುವ ಮುಖ್ಯ ಕಾಳಜಿ.


ಜೀವವಿಮೆ ಮತ್ತು ಆರೋಗ್ಯ ವಿಮೆಯ ಪಾಲಿಸಿಯನ್ನು ಪಡೆದ ನಂತರ, ಆರ್ಥಿಕ ಸಲಹೆಗಾರರನ್ನು, ಅದರಲ್ಲೂ ಹೂಡಿಕೆ ತಜ್ಞರನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು.





ಮ್ಯೂಚುವಲ್ ಫಂಡ್:
ನೀವು ಕೆಲಸದಲ್ಲಿ ಇರುವುದರಿಂದ, ಇನ್ನೂ ಅನುಭವ ಪಡೆಯುವ ಹಂತದಲ್ಲಿ ಇರುವವರಾಗಿದ್ದೀರಿ, ಹಾಗಾಗಿ ನೇರವಾಗಿ ಷೇರಿನಲ್ಲಿ ಹಣ ತೊಡಗಿಸುವ ಬದಲು ಮ್ಯೂಚುವಲ್ ಫಂಡ್ ಮೂಲಕ ನೀವು ಹಣ ಹೂಡಿಕೆ ಆರಂಭಿಸಬಹುದು.

ಮ್ಯೂಚುವಲ್ ಫಂಡಿನಲ್ಲಿ ಪ್ರತಿ ತಿಂಗಳೂ ಕಟ್ಟುತ್ತ ಹೋಗಬಹುದಾದ, ಅತ್ಯಂತ ಸರಳ ಮತ್ತು ಸುರಕ್ಷಿತ ಹೂಡಿಕೆ ಸಿಪ್-ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಅಲ್ಲಿ ಹಣ ಹೂಡಬಹುದು. ಸಿಪ್ ನ ಅನುಕೂಲವೇನೆಂದರೆ ಷೇರು ಪೇಟೆ ಮೇಲಿರಲಿ, ಕೆಳಗಿರಲಿ, ಹೂಡಿಕೆಗೆ ಇದು ಸರಿಯಾದ ಸಮಯವೋ, ಇಲ್ಲವೋ ಎಂದು ಯೋಚಿಸುವ ಅಗತ್ಯವಿಲ್ಲ. ಪೇಟೆಯ ಏರಿಳಿತಗಳಿಗೆ ಇದು ರಕ್ಷಣೆಯನ್ನು ನೀಡುತ್ತದೆ.


ನೀವೂ ಹೂಡಿಕೆ ಮಾಡುವಾಗ ಇದು ಸರಿಯಾದ ಸಮಯ ಹೌದೋ ಅಲ್ಲವೋ ಎನ್ನುವುದಕ್ಕಿಂತ ನಿಮ್ಮ ಅನುಕೂಲ ಮುಖ್ಯ. ಈಗ ಷೇರು ಪೇಟೆಯಲ್ಲಿ ಏರಿಕೆ ಇದೆ, ಇಳಿಯಲಿ ಎನ್ನುವುದು, ಅಥವಾ ಈಗಾಗಲೇ ಸಾಕಷ್ಟು ಇಳಿದಿದೆ, ಇನ್ನಷ್ಟು ಇಳಿದರೆ ಎಂದು ಹೆದರುವುದು ಇವೆರಡೂ ಬೇಡ. ಹಣ ಹೂಡುವುದಕ್ಕೆ ನೀವು ಸಿದ್ಧವಿದ್ದೀರಾ, ಇದು ಬಹಳ ಮುಖ್ಯ.


ಸಿಪ್ ಇದರಲ್ಲಿ ಹಣ ಹೂಡುವಾಗ ಪೇಟೆ ಮೇಲಿದೆ, ಕೆಳಗಿದೆ ಎನ್ನುವುದು ಮುಖ್ಯ ಆಗುವುದಿಲ್ಲ.




ಮ್ಯೂಚುವಲ್ ಫಂಡಿನ ಸಿಪ್ ಅಲ್ಲಿ ಹಣವನ್ನು ಕೇವಲ ಒಂದು ಸಾವಿರ ರೂಪಾಯಿಗಳಿಂದಲೂ ತೊಡಗಿಸಬಹುದು. ಇದನ್ನು ಹೂಡಿಕೆ ಎಂದು ಭಾವಿಸಿದಾಗ ಎಷ್ಟೋ ಸಾರಿ ನಾವದನ್ನು ಮುಂದೂಡುತ್ತೇವೆ. ಅದರ ಬದಲಿಗೆ ಸಾಲಕ್ಕೆ ಬಡ್ಡಿ ಕಟ್ಟಿದ ಹಾಗೆ, ಮನೆಯ ಬಾಡಿಗೆ ಕಟ್ಟಿದ ಹಾಗೆ ಎಂದು ಯೋಚಿಸಿದಾಗ ನಮ್ಮೊಳಗೇ ಒಂದು ಸೀರಿಯಸ್ ನೆಸ್ ಇರುತ್ತದೆ. ಹಾಗಾಗಿ ಸಿಪ್ ತಿಂಗಳು, ತಿಂಗಳು ಮಾಡುವ ಹೂಡಿಕೆ, ದೀರ್ಘ ಅವಧಿಯಲ್ಲಿ ಅಧಿಕ ಲಾಭವನ್ನು ನೀವೇ ನೋಡುತ್ತೀರಿ.


ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಮಾಡಿ. ದೀರ್ಘ ಕಾಲದವರೆಗೆ ಹೂಡಿಕೆ ಮಾಡಿ.


-ಶ್ರೀಕಾಂತ್ ಮಾತೃಬಾಯಿ,
ಕಾರ್ಯ ನಿರ್ವಾಹಕ ನಿರ್ದೇಶಕರು,
ಶ್ರೀಕವಿ ವೆಲ್ತ್,
ಆರ್ಥಿಕ ಸಲಹೆಗಾರರು.
This article was published in Kannada magazine PROFIT PLUS

Request my readers (specially Kannada readers) to subscribe the magazine PROFIT PLUS




You can send an email to them at profitpluskannada@gmail.com and/or mediam146@gmail.com