Thursday 11 June 2020

ಉಳಿಕೆಯೇ ಗಳಿಕೆ

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕನಸಿರುತ್ತದೆ. ನಾಳೆ ಇವತ್ತಿಗಿಂತ ಚೆನ್ನಾಗಿ ಇರಬೇಕು ಎನ್ನುವ ಕನಸು. ಹೊಸ ಕಾರು ಖರೀದಿಸಬೇಕು, ಸ್ವಂತ ಮನೆ ಹೊಂದಬೇಕು. ನಗರಗಳಲ್ಲಿ ನಿವೇಶನ ಕೊಳ್ಳಬೇಕು. ಹೀಗೆ ಒಂದಿಲ್ಲೊಂದು ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ. ಈ ಎಲ್ಲ ಕನಸುಗಳ ಈಡೇರಿಕೆಗಾಗಿ ಒಂದು ಸಂಕಲ್ಪವನ್ನು ಮಾಡಬೇಕು. ಆ ಸಂಕಲ್ಪವೇನೆಂದರೆ, 'ಉಳಿತಾಯ ಮಾಡುವುದು'. ಖರ್ಚೆಲ್ಲ ಕಳೆದು ಉಳಿದದ್ದು ಉಳಿತಾಯವಲ್ಲವೇ ಅಲ್ಲ. ಮೊದಲು ಉಳಿಸುವುದು; ನಂತರ ಖರ್ಚು ಮಾಡುವುದು. ಯಾಕೆ ಉಳಿಸಬೇಕು ಎನ್ನುವುದು ಸ್ಪಷ್ಟವಾದರೆ ಉಳಿಸುವುದು ಕಷ್ಟಕರ ಅನಿಸದೆ, ಇಷ್ಟಕರವಾಗುತ್ತದೆ.
ನಮ್ಮ ಜೀವನದಲ್ಲಿ ನಾವು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ ಎಷ್ಟು ಉಳಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಏನೂ ಉಳಿಸದಿದ್ದರೆ, ಏನೂ ಗಳಿಸದ ಹಾಗೆ. ಅದಕ್ಕೆ ಹೇಳುತ್ತಿದ್ದರು ಅಜ್ಜ ದುಡಿದದ್ದೆಲ್ಲ ಮೊಮ್ಮಗನ ಉಡಿದಾರಕ್ಕೆ ಎಂದು. ಹಾಗಾದರೆ ದುಡಿದದ್ದು ಪ್ರಯೋಜನ ಇಲ್ಲ. ಯಾವುದೇ ಹಣಕಾಸು ಸಲಹಗಾರರ ಬಳಿ ಹೋದರೂ ಅವರು ಹೇಳುವ ಮೊದಲ ಸಲಹೆ, "ಖರ್ಚು ಕಳೆದು ಉಳಿಯುವುದು ಉಳಿತಾಯ ಅಲ್ಲವೇ ಅಲ್ಲ". ಬದಲಾಗಿ ಆದಾಯದಲ್ಲಿ ಉಳಿತಾಯವನ್ನು ಕಳೆದು ಉಳಿದದ್ದು ಖರ್ಚಾಗಬೇಕು. ಅಂದರೆ ಖರ್ಚು ಕಳೆದು ಉಳಿದದ್ದು ಉಳಿತಾಯ ಎನ್ನುವುದು ತಪ್ಪು. ಖರ್ಚು ಮಾಡುವಾಗ ಮೊದಲು ನಾವು ಎಷ್ಟು ಉಳಿಸಬೇಕು ಎಂದುಕೊಂಡಿರುತ್ತೇವೆಯೋ ಅಷ್ಟನ್ನು ಉಳಿಸಿದ ನಂತರವೇ ಖರ್ಚು ಮಾಡಬೇಕು.


ಯಾಕೆ ಉಳಿಸಬೇಕು?
ಉಳಿಸಬೇಕು ಎಂದ ತಕ್ಷಣ ಪ್ರತಿಯೊಬ್ಬರೂ ಕೇಳುವ ಪ್ರಶ್ನೆ 'ಯಾಕೆ ಉಳಿಸಬೇಕು?". ನಿಜ, ಇವತ್ತು ಮಜಾ ಮಾಡಿ ಬಿಡೋಣ. ನಾಳೆ ಎನ್ನುವುದನ್ನು ಯಾರು ಕಂಡಿದ್ದಾರೆ? ನನ್ನ ಪಾಯಿಂಟ್ ಇರುವುದು ಇಲ್ಲಿಯೆ. ನಾಳೆ ಎನ್ನುವುದುದನ್ನು ಕಂಡವರು ಯಾರು? ನಾಳೆ ಏನು ಬೇಕಾದರೂ ಆಗಬಹುದು. ಆರೋಗ್ಯ ಹದಗೆಡಬಹುದು. ಕೆಲಸ ಹೋಗಬಹುದು. ಸಂಬಳ ಕಡಿಮೆಯಾಗಬಹುದು. ಸಂಬಳವೇ ಇಲ್ಲದಿರಬಹುದು. ಏನೂ ಬೇಕಾದರೂ ಆಗಬಹುದು. ಯಾರಿಗೆ ಗೊತ್ತು? ಅದಕ್ಕಾಗಿಯೇ ಉಳಿತಾಯ ಮಾಡಬೇಕು. ನಿರೀಕ್ಷಿತವಾದ ಕೆಲವು ಘಟನೆಗಳು ನಡೆದೇ ತೀರಬಹುದು. ಅಂತಹವುಗಳು ಯಾವುವು ಎಂಬುದನ್ನು ನೋಡೋಣ.


ಹಣದುಬ್ಬರ
ವರ್ಷದಿಂದ ವರ್ಷಕ್ಕೆ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಹಾಗಾಗಿ ಹಣದ ಮೌಲ್ಯ ಕಡಿಮೆಯಾಗಿತ್ತಿರುತ್ತದೆ. ಉದಾಹರಣೆಗೆ ಒಂದು ವರ್ಷದ ಹಿಂದೆ ಒಂದು ಸಾವಿರ ರೂಪಾಯಿಗಳಿಗೆ ಎಷ್ಟೆಲ್ಲ ವಸ್ತುಗಳು ಖರೀದಿಸಬಹುದಿತ್ತು. ಈಗ ಅಷ್ಟು ವಸ್ತುಗಳು ಖರೀದಿಸಲಾಗುವುದಿಲ್ಲ. ಅಂದರೆ ಕಳೆದ ವರ್ಷ 100 ರೂಪಾಯಿಗೆ ಒಂದು ಕೆಜಿ ಸೇಬು ಹಣ್ಣು ಬರುತ್ತಿದ್ದರೆ, ಈ ವರ್ಷ ಇದರ ಬೆಲೆ 110 ರೂಪಾಯಿ ಆಗಿರಬಹುದು. ಅಂದರೆ ಹಣದುಬ್ಬರದಲ್ಲಿ ಶೇಕಡಾ 10ರಷ್ಟು ಏರಿಕೆಯಾಗಿದೆ ಎಂದು ಅರ್ಥ. ಈ ಏರಿಕೆಗೆ ತಕ್ಕ ಹಾಗೆ ನಮ್ಮ ಸಂಬಳದಲ್ಲಾಗಲೀ ಆದಾಯದಲ್ಲಾಗಲೀ ಏರಿಕೆ ಆಗುವುದಿಲ್ಲ. ಇದೊಂದು ಕಟು ಸತ್ಯ. ಇದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಂಡೆ ಉಳಿತಾಯ ಮಾಡುತ್ತಿರಬೇಕು.

ತುರ್ತು ಸಂದರ್ಭ
ನಮ್ಮೆಲ್ಲರ ಜೀವನ ಒಂದೇ ರೀತಿ ಇರುವುದಿಲ್ಲ. ಏನು ಬೇಕಾದರೂ ಸಂಭವಿಸಬಹುದು. ಉದಾಹರಣೆಗೆ ಮಾಡುತ್ತಿರುವ ಕೆಲಸ ಹೋಗಬಹುದು. ಆಫೀಸಿನಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇಲ್ಲದೇ ಕೆಲಸ ಬಿಡಬೇಕಾಗಬಹುದು. ಇನ್ನೊಂದು ಕೆಲಸ ಸಿಗಲು ಕೆಲವು ತಿಂಗಳುಗಳೇ ಬೇಕಾಗಬಹುದು. ಆಗ ಸಂಸಾರ ನಿರ್ವಹಣೆ ಮಾಡಲು, ಅಂದರೆ ಮನೆ ಬಾಡಿಗೆ, ಗ್ಯಾಸ್, ದಿನಸಿ, ವಿದ್ಯುತ್/ನೀರಿನ ಬಿಲ್ ಹೀಗೆ ದಿನನಿತ್ಯದ ಎಷ್ಟೋ ಖರ್ಚು ವೆಚ್ಚಗಳಿರುತ್ತದೆ. ಅವುಗಳನ್ನೆಲ್ಲ ನಿಭಾಯಿಸಲೇ ಬೇಕು. ಇನ್ನೊಂದು ಕೆಲಸ ಸಿಗುವವರೆಗೆ, ಇನ್ನೊಂದು ಆದಾಯದ ದಾರಿ ಸಿಗುವವರೆಗೆ, ಜೀವನ ನಿರ್ವಹಿಸಲು ಕಷ್ಟವಾಗಬಾರದು. ಆಗ ಸಾಲ-ಸೋಲ ಮಾಡುವ ಪರಿಸ್ಥಿತಿ ಎದುರಾಗಬಾರದು. ಅವುಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯ ಮಾಡಲೇ ಬೇಕು.


ಕನಸು ನನಸಾಗಲು
ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕನಸಿರುತ್ತದೆ. ನಾಳೆ ಇವತ್ತಿಗಿಂತ ಚೆನ್ನಾಗಿ ಇರಬೇಕು ಎನ್ನುವ ಕನಸು. ಹೊಸ ಕಾರು ಖರೀದಿಸಬೇಕು, ಸ್ವಂತ ಮನೆ ಹೊಂದಬೇಕು. ನಗರಗಳಲ್ಲಿ ನಿವೇಶನ ಕೊಳ್ಳಬೇಕು. ಹೀಗೆ ಒಂದಿಲ್ಲೊಂದು ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ. ಈ ಎಲ್ಲ ಕನಸುಗಳ ಈಡೇರಿಕೆಗಾಗಿ ಒಂದು ಸಂಕಲ್ಪವನ್ನು ಮಾಡಬೇಕು. ಆ ಸಂಕಲ್ಪವೇನೆಂದರೆ, 'ಉಳಿತಾಯ ಮಾಡುವುದು'. ನಮ್ಮ ಜೀವನದಲ್ಲಿ ನಾವು ಇಟ್ಟುಕೊಂಡಂತಹ ಈ ಎಲ್ಲ ಕನಸುಗಳು ಈಡೇರುವುದಕ್ಕೆ ಮೂಲ ಬೀಜವೇ ಉಳಿತಾಯ. ನೀವು ಗಮನಿಸಿರಬಹುದು, ಉಳಿತಾಯ ಮಾಡಲಾಗದವರು ಯಾವುದೇ ಹೆಚ್ಚಿನ ಆಸ್ತಿ ಮಾಡುವುದೇ ಇಲ್ಲ.

ನಿರೀಕ್ಷಿತ ವೆಚ್ಚ
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮನೆಯಲ್ಲಿ ನಡೆಯುವ ಸಮಾರಂಭಗಳು, ಅದು ಮದುವೆ ಇತ್ಯಾದಿ ಇರಬಹುದು. ಇವೆಲ್ಲವೂ ನಿರೀಕ್ಷಿತ ವೆಚ್ಚಗಳು. ಮಕ್ಕಳ ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣ ಈಗ ದುಬಾರಿಯದ್ದಾಗಿದೆ. ಉತ್ತಮ ಶಿಕ್ಷಣ ಇದ್ದಾಗ ಮಾತ್ರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಹಾಗಾಗಿ ಮಕ್ಕಳ ಶಿಕ್ಷಣಕ್ಕೆ ಅಂದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡಲೇ ಬೇಕು.


ನಿವೃತ್ತಿ
ಎಲ್ಲರ ಜೀವನದಲ್ಲೂ ನಿವೃತ್ತಿ ಇದ್ದೇ ಇರುತ್ತದೆ. ಖಾಸಗಿ ಕಂಪನಿಗಳಲ್ಲಿ ಕೆಲಸದಲ್ಲಿದ್ದರಂತೂ ನಿವೃತ್ತಿ ವೇತನ ಇಲ್ಲವೇ ಇಲ್ಲ. ನಿವೃತ್ತಿ ಆದರೂ ನಮ್ಮ ಖರ್ಚುಗಳೇನೂ ನಿವೃತ್ತಿಯಾಗುವುದಿಲ್ಲ. ಬದಲಾಗಿ ಖರ್ಚು ಇನ್ನೂ ಹೆಚ್ಚಾಗಿರುತ್ತದೆ. ದುಡಿಯುವಾಗ ಉಳಿಸಿದರೆ ಮಾತ್ರ ಅದು ನಿವೃತ್ತಿಯ ಸಮಯದಲ್ಲಿ ನಮ್ಮನ್ನು ಕಾಪಾಡುತ್ತದೆ. ಅದಿಲ್ಲದಿದ್ದರೆ ನಿವೃತ್ತಿಯ ಇಳಿಗಾಲ ಬಹಳ ಕಷ್ಟದ ಕಾಲವಾಗಲಿದೆ.

ಆರೋಗ್ಯ
ಇತ್ತೀಚಿನ ವರ್ಷಗಳಲ್ಲಿ ನಮ್ಮೆಲ್ಲರೆದುರಿರುವ ಬಹುದೊಡ್ಡ ಸವಾಲು ಎಂದರೆ 'ಆರೋಗ್ಯ'. ಈಗ ಎಲ್ಲದಕ್ಕೂ ಔಷಧಿಗಳಿವೆ ಎಂದು ನಮಗೆ ತಿಳಿದಿದೆ. ಆದರೆ ಅವುಗಳು ದುಬಾರಿಯಾಗಿವೆ. ಆರೊಗ್ಯ ವಿಮೆ ಇರಬಹುದು, ಆದರೆ ಈ ವಿಮೆ ಕೆಲವೇ ಖಾಯಿಲೆಗಳಿಗೆ ಅನ್ವಯಿಸುತ್ತದೆ. ಅಷ್ಟೇ ಅಲ್ಲ, ಎಲ್ಲ ಹಣವೂ ಮರುಪಾವತಿಯಾಗುವುದಿಲ್ಲ. ಹಾಗಾಗಿ ನಾವು ಹಣ ಉಳಿಸಿದರೆ ಮಾತ್ರ ನಮ್ಮ ಅನಾರೋಗ್ಯದ ಸಂದರ್ಭದಲ್ಲೂ ಹೆಚ್ಚಿನ ಒತ್ತಡ ಇಲ್ಲದೇ ಇರಬಹುದು. ಹಣ ಉಳಿಸಿದಾಗ ಅದು ನೀಡುವ ಭದ್ರತೆಯ ಭಾವನೆಯಿಂದಲೇ, ನಾವು ಹೆಚ್ಚು ನೆಮ್ಮದಿಯಾಗಿ ಇರುತ್ತೇವೆ. ಆರೋಗ್ಯಪೂರ್ಣ, ನೆಮ್ಮದಿಯ ಮತ್ತು ಗುಣಮಟ್ಟದ ಜೀವನಕ್ಕೆ ಉಳಿತಾಯ ಬೇಕೇ ಬೇಕು ಎನ್ನುವುದು ನೆನಪಿಡಿ.


-ಶ್ರೀಕಾಂತ್ ಮಾತೃಬಾಯಿ,
ಕಾರ್ಯ ನಿರ್ವಾಹಕ ನಿರ್ದೇಶಕರು,
ಶ್ರೀಕವಿ ವೆಲ್ತ್, 
ಆರ್ಥಿಕ ಸಲಹೆಗಾರರು.


English Version of this article